ಧರಣಿಪಂಡಿತ:-
ಕಾಲ ಕ್ರಿ.ಶ.ಸು. 1650.  ವರಾಂಗನೃಪಚರಿತೆ ಹಾಗೂ ಬಿಜ್ಜಳರಾಯಚರಿತೆ ಕರ್ತೃ. ಜೈನ. ಗೋತ್ರ ಭಾರದ್ವಾಜ. ತಾತ ವಿಷ್ಣುವರ್ಧನಪುರದ ವೈದ್ಯೋತ್ತಮನಾದ ಧರಣಿಪಂಡಿತ. ತಂದೆ ಪದ್ಮಣಪಂಡಿತ. ವಿಷ್ಣುವರ್ಧನಪುರದ ಪಾಶ್ರ್ವತೀರ್ಥಂಕರ ಮನೆದೇವರು.      
  
ಕವಿ ಹಿಂದಿನ ಕನ್ನಡ ಕವಿಗಳಲ್ಲಿ ಹಂಪ, ರನ್ನ ಹೊನ್ನ, ನೇಮಿಚಂದ್ರ ಮತ್ತು ನಾಗವರ್ಮ ಮೊದಲಾದವರನ್ನು ಭಕ್ತಿಯಿಂದ ಸ್ಮರಿಸಿದ್ದಾನೆ. ವರಾಂಗನೃಪಚರಿತೆ ಭಾಮಿನೀಷಟ್ಟದಿಯಲ್ಲಿದೆ.  ಪೂರ್ವದ ಮುನೀಶ್ವರರು ಹೇಳಿದ ಕಥೆಯನ್ನೇ ತಾನು ಕನ್ನಡದಲ್ಲಿ ರಚಿಸಿದಂತೆ ಕವಿ ಹೇಳುತ್ತಾನೆ.             

	ಕವಿಯ ಎರಡನೆಯ ಗ್ರಂಥ ಬಿಜ್ಜಳರಾಯಚರಿತೆ ಸಾಂಗತ್ಯಗ್ರಂಥ; ಹನ್ನೆರಡು ಸಂಧಿಗಳಿವೆ.  ಇದರಲ್ಲಿ ಕಲ್ಯಾಣಪುರದ ದೊರೆಯಾದ ಬಿಜ್ಜಳರಾಯನ ಕಥೆ ಇದೆ.  ಹಿಂದೆ ವಿಜಯಮ್ಮಿ ತನ್ನ ತಾಯಿಗೆ ಹೇಳಿದ ಕಥೆಯನ್ನೇ ತಾನು ವಿಸ್ತರಿಸಿ ಬರೆದಂತೆ ಕವಿ ಹೇಳುತ್ತಾನೆ.  ಇಲ್ಲಿನ ಕಥೆ ಕುತೂಹಲಕಾರಿಯಾಗಿದೆ.  ಇಲ್ಲಿನ ಬಿಜ್ಜಳ ಜೈನಧರ್ಮಾವಲಂಬಿ, ತನ್ನ ಜೋಯಿಸನಾದ ಮಾದಿರಾಜನ ಮಗಳು ಪದ್ಮಿನಿಯನ್ನು ಮದುವೆಯಾದನಲ್ಲದೆ ಅವಳ ಅಣ್ಣನಾದ ಬಸವನಿಗೆ ಸೇನಾಪತಿ ಪಟ್ಟವನ್ನು ಕೊಟ್ಟ. ಅವನು ಒಂದಾನೊಂದು ಕಾಲದಲ್ಲಿ ಇದಿರು ಬೀಳಲು ದೊರೆ ಅವನನ್ನು ಸೋಲಿಸಿದ.  ಆಗ ಬಸವ ಮಡುವಿನಲ್ಲಿ ಬೀಳಲು ದೊರೆ ಅವನನ್ನು ಹೊರಕ್ಕೆ ತೆಗೆಯಿಸಿ ಅವನ ಅಪರಾಧವನ್ನು ಕ್ಷಮಿಸಿ ತಿರುಗಿ ಸೇನಾಪತಿ ಪದವಿಯನ್ನಿತ್ತ. ಆಮೇಲೆ ತಾನು ಕಳುಹಿದ  ವಿಷದ ಮಾವಿನ ಹಣ್ಣನ್ನು ಮೂಸಿ ಬಿಜ್ಜಳ ಸಾಯಲು ಬಸವ ಹೆದರಿ ಓಡಿಹೋಗಿ ಉಳಿವೆನೆಂದು ಕಡಲತಡಿಯ ವೃಷಭಪುರದಲ್ಲಿಯ ಒಂದು ಬಾವಿಯಲ್ಲಿ ಮುಳುಗಿ ಸತ್ತುದರಿಂದ ಆ ಊರಿಗೆ ಉಳಿವೆಯೆಂದು ಹೆಸರಾಯಿತು.  ಈ ಕಥೆಯ ಐತಿಹಾಸಿಕತೆ ಎಷ್ಟೆಂಬುದು ಇನ್ನೂ ನಿರ್ಧರಿಸಲ್ಪಡಬೇಕಾಗಿದೆ.                
(ಕೆ.ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ